ಅಜ್ಜಿ ಎಂದರೆ ಸಾಕು ಅದೇನೋ ಹರುಷ. ಅಜ್ಜಿ ಎಂದಾಕ್ಷಣ ನೆನಪಿಗೆ ಬರುವುದು ಆಕೆಯ ಬಿಳಿ ಕೂದಲು, ವಿನಮ್ರ ಮತ್ತು ಪ್ರೀತಿಯ ಮುಖ ಹಾಗೂ ಸುಕ್ಕುಗಳಿಂದ ತುಂಬಿದ ತ್ವಚೆ. ಅವಳೇ ನಮ್ಮ ಮನೆಯ ಅತಿ ಕ್ರಿಯಾಶಾಲಿ ವ್ಯಕ್ತಿ. ಕೆಲವೊಮ್ಮೆ ಆಕೆಯ ಚುರುಕುತನ, ಜ್ಞಾಪಕಶಕ್ತಿ ಹಾಗೂ ಕಾರ್ಯಗಳು ಎಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿ ಮಾಡಿ ಬಿಡುತ್ತಿತ್ತು.
ನನ್ನ ತಂದೆ, ತಾಯಿ ಕೆಲಸಕ್ಕೆ ಹೋಗುತ್ತಿದ್ದರಿಂದ, ನಮ್ಮ ಪಾಲನೆ-ಪೋಷಣೆ ಎಲ್ಲಾ ಅಜ್ಜಯದ್ದೆಯಾಗಿತ್ತು. ಇದರಿಂದ ನನ್ನ ಜೊತೆ ಆಟವಾಡುವ, ಕಥೆ ಹೇಳುವ, ಕೈತುತ್ತು ನೀಡುವ, ಅಮ್ಮ-ಅಪ್ಪನ ಏಟುಗಳಿಂದ ನನ್ನನ್ನು ರಕ್ಷಿಸುವ, ತಪ್ಪುಗಳನ್ನು ತಿದ್ದುವ, ನನ್ನ ಎಲ್ಲಾ ಕಾಟ ಹಾಗೂ ಕೋಪಗಳನ್ನು ಸಹಿಸುವ ಒಬ್ಬ ಒಳ್ಳೆಯ ಗೆಳತಿಯಾಗಿದ್ದಳು ‘ನನ್ನ ಅಜ್ಜಿ’.
ಸೂರ್ಯ ನೆತ್ತಿಯ ಮೇಲಿರುವಾಗ ನನ್ನ ಮತ್ತು ಅಕ್ಕನಿಗಾಗಿ ಕಾಲುನೋವಿದ್ದರೂ ಬಿಸಿಯೂಟವನ್ನು ತರುತ್ತಿದ್ದರು. ಸೂರ್ಯ ಮುಳುಗುವ ವೇಳೆಗೆ ನಮಗೆ ಇಷ್ಟದ ತಿಂಡಿಗಳನ್ನು ತರುತ್ತಿದ್ದರು. ನಾವು ಹೆಚ್ಚು ಅಂಕ ಪಡೆದಾಗ ನಮಗಿಂತ ಹೆಚ್ಚು ಸಂತೋಷ ಪಟ್ಟು, ಆಕೆಯೇ ಎಲ್ಲರಿಗೂ ವಿಷಯ ತಿಳಿಸುತ್ತಿದ್ದಳು. ಆಕೆಯನ್ನು ನಾನು “ನಿಮಗೆ ಬಿಳಿ ಕೂದಲು” ಎಂದು ರೇಗಿಸಿದಾಗಲೆಲ್ಲ, ಆಕೆ ತುಂಬು ಹೃದಯದಿಂದ ನಗುತ್ತಿದ್ದಳು.
ಆಕೆಯೇ ನಮ್ಮ ಕುಟುಂಬದ ಆಧಾರಸ್ಥಂಭ, ರಕ್ಷಾಕವಚ. ಆಕೆ ನಮ್ಮನ್ನು ಬಿಟ್ಟು ಹೋಗುವ ಯೋಚನೆಯೇ ಇರಲಿಲ್ಲ. ಆದರೇ “ದೇವರ ಆಟ ಬಲ್ಲವರಾರು” ಎಂಬ ಸಾಲಿನಂತೆ ಕಾಲಚಕ್ರವನ್ನು ನಿಲ್ಲಿಸುವವರು ಯಾರು ಇರಲಿಲ್ಲ. ಇಂದು ಕರಾಳ ದಿನದಂದು ನಮ್ಮನ್ನು ಬಿಟ್ಟು ಹೊರಟೇ ಹೋದಳು.
ಅಜ್ಜಿ ಕಿತ್ತೂರು ರಾಣಿ ಚೆನ್ನಮ್ಮನ ಹಾಗೆ ಸ್ವಾಭಿಮಾನಿಯಾಗಿ,
ಒನಕೆ ಓಬವ್ವನ ಹಾಗೆ ಜೀವನದಲ್ಲಿ ವನಿತೆಯಾಗಿ,
ಝಾನ್ಸಿರಾಣಿ ಲಕ್ಷಿö್ಮಬಾಯಿಯ ಹಾಗೆ ನಿನ್ನ ಇಡೀ ಬದುಕನ್ನು
ನಿನ್ನ ಮಕ್ಕಳು, ಮೊಮ್ಮಕ್ಕಳಿಗೆ ಮುಡಿಪಾಗಿಟ್ಟು,ನಮ್ಮನ್ನು
ಬಿಟ್ಟು ಹೋದೆಯಾ ‘ನನ್ನ ನೆಚ್ಚಿನ ಬಿಳಿ ಕೂದಲಿನ ಅಜ್ಜಿ’…..

                                                                                                             ಗಗನ.ಎಂ.ಎಸ್

                                                                                              (ವಾಣಿಜ್ಯ ವಿಭಾಗ-೨೦೧೮-೧೯)